ತೀಯಾಕ್ರಿಟಸ್
	ಗ್ರೀಕ್ ಕವಿ. ಗ್ರಾಮೀಣ ಕಾವ್ಯ ಸಂಪ್ರದಾಯದ ಪ್ರವರ್ತಕ. ಈತನ ಜೀವಿತದ ಉಚ್ಛ್ರಾಯಕಾಲ ಸುಮಾರು ಕ್ರಿ. ಪೂ.270; ಹುಟ್ಟಿದ, ಸತ್ತ ವರ್ಷಗಳು ಯಾವುವೋಗೊತ್ತಿಲ್ಲ. ಸಿಸಿಲಿಯ ಸೈರಕ್ಯೂಸ್ ನಗರದಲ್ಲಿ ಹುಟ್ಟಿ ಬಹುಶಃ ಅಲ್ಲೇ ಬಹುಕಾಲ ವಾಸಿಸಿದ ಸಾಹಿತಿಗಳ ಮುಖ್ಯ ಬೀಡಾದ ಕೋಸ್ ದ್ವೀಪದಲ್ಲೂ ಪ್ರಖ್ಯಾತ ಅಲೆಕ್ಸಾಂಡ್ರಿಯದಲ್ಲೂ ತನ್ನ ಬಾಳಿನ ಸ್ವಲ್ಪ ಭಾಗವನ್ನು ಕಳೆದಿರಬೇಕು. ಈತನ ಕೃತಿಗಳ ಪ್ರಧಾನ ಲಕ್ಷಣವೂ ಮುಖ್ಯ ಸೊಗಸೂ ಹಿಂದಿನ ಗ್ರಾಮಾಂತರ ಜೀವನದ ಚಿತ್ರಣ. ಸಿಸಿಲಿಯ ಹಳ್ಳಿಗಾಡಿನವರಿಗೆ ಪದ್ಯರಚನೆ ಹಾಡುಗಾರಿಕೆ ಎರಡೂ ಚೆನ್ನಾಗಿ ಒಗ್ಗಿ ಬಂದಿದ್ದುವು. ಆದ್ದರಿಂದ ಈತ ಹೊಗಳಿರುವ ಗ್ರಾಮ ಕವಿಗಳು ನಿಜವಾಗಿ ಇದ್ದಿರಬಹುದು. ಅವರ ಹೆಸರುಗಳು ಕಲ್ಪಿತವಾದರೂ ನಾನಾ ವಿಷಯಗಳನ್ನು ಈತ ಪ್ರತಿಪಾದಿಸಿದ್ದರೂ ಕೃತಿಗಳ ಆಕಾರವೂ ವಾತಾವರಣವೂ ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಅವುಗಳಿಗೆ ಇಡಿಲ್ಸ್ ಅಥವಾ ಜನಪದಗೀತೆಗಳು ಎಂಬ ಹೆಸರು ಸಂದು ಬಂದಿದೆ. ತನ್ನ ಕೃತಿ ಒಂದೊಂದಕ್ಕೂ ಸಂಗೀತ ಸೂಚನೆಯಾಗಿ ದನಗಾಹಿಯ ರೀತಿ, ಕುರಿಕಾಯುವವನ ರೀತಿ ಇತ್ಯಾದಿ ಮುನ್ನಡೆಯನ್ನು ಜೋಡಿಸುವುದು ಇವನ ನಿಯತ ಪದ್ಧತಿಯಾಗಿತ್ತು. ಇವನ 32 ಕೃತಿಗಳಲ್ಲಿ ಹತ್ತು ಮಾತ್ರ ನೈಜ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದವು. ಆರು ಕಥನಕಾವ್ಯ, ಆರು ಪ್ರೇಮಗೀತೆ , ನಾಲ್ಕು ವಾಸ್ತವ ಜೀವನದ ವರ್ಣನೆ, ಎರಡು ಆಶ್ರಯದಾತರ ಸಂಬೋಧನೆ, ಎರಡು ಸಂದರ್ಭಗಳ ವರ್ಣನೆ, ಮಿಕ್ಕ ಎರಡರ ಕರ್ತೃತೃದ ವಿಚಾರವಾಗಿ ಸಂದೇಹವಿದೆ. 

	ಪಟ್ಟಣದಲ್ಲಿ ನಡೆದ ಘಟನಾವಳಿ ಎಂದು ವಿವರಿಸುವ ಕವನಗಳು ಮೈಮ್ ಎಂಬ ಲಘುನಾಟಕದ ಬಗೆಯಲ್ಲಿವೆ. ಒಂದರಲ್ಲಿ ಗಾರ್ಗೊ ಹಾಗೂ ಪ್ರಾಕ್ಸಿನೋವ ಎಂಬ ಇಬ್ಬರು ಮಧ್ಯಮ ವರ್ಗದ ಮಹಿಳೆಯರು ಅಲೆಕ್ಸಾಂಡ್ರಿಯದಲ್ಲಿ ಜರುಗುತ್ತಿದ್ದ ಅಡಾನಿಸ್ ಮಹೋತ್ಸವಕ್ಕೆ ಹೋಗುತ್ತಾರೆ. ಅಲ್ಲಿ ಅವರಿಗಾಗುವ ಕೊಂಚ ಆತಂಕದ ಅನುಭವಗಳನ್ನು ಕವಿ ವಿನೋದವಾಗಿ ವರದಿಗೈಯುತ್ತಾನೆ. ಅದೇ ಬಗೆಯ ಇನ್ನೊಂದು ಕವನದಲ್ಲಿ ತರುಣರು ಹೇಗೆ ಹುಡುಗಾಟಕ್ಕಾಗಿ ತರುಣಿಯರನ್ನು ಕೆಣಕಿ ಕಷ್ಟನಷ್ಟಕ್ಕೆ ಸಿಕ್ಕಿ, ತಲೆತಪ್ಪಸಿಕೊಳ್ಳಲಿ ಪರದೇಶಕ್ಕೆ ಓಡುತ್ತಾರೆ ಎಂಬುದರ ನಿರೂಪಣೆಯಿದೆ. ಕವಿತಾ ಸ್ವಾರಸ್ಯ ಕಡಿಮೆಯಾದರೂ ಇದರ ಅಸಭ್ಯ ಗ್ರಾಮ್ಯತೆ ಯಾಥಾರ್ಥಜೀವನದ ಪಡಿಯಚ್ಚಾಗಿದೆ. ಸಿಮೀತಾ ಎಂಬ ಯುವತಿಯ ನಿಷ್ಪಲ ಪ್ರೇಮವನ್ನು ಕಥನಿಸುವ ಕಾವ್ಯ ಸತ್ಯ ಸೌಂದರ್ಯ ಘನವಿಷಾದ ವಿಚಿತ್ರ ಹಾಸ್ಯಗಳ ಸಂಯೋಜನದಿಂದ ಚಿತ್ರದಲ್ಲಿ ನೆಟ್ಟು ನಿಲ್ಲತ್ತದೆ; ಅದನ್ನು ಮರೆಯಲಾಗುವುದಿಲ್ಲ. ಅದನ್ನು ಅನೇಕೆ ಕವಿಗಳು ಅನುಕರಿಸಿದ್ದಾರಾದರೂ ಯಾವೊಬ್ಬನೂ ಮೂಲದ ಸಮೀಪಕ್ಕೆ ಹೆಜ್ಜೆಯಿಡಲಾರ. ಸಿಮೀತಾ ತನ್ನ ಆಶೆಯನ್ನು ಕೈಗೂಡಿಸಿಕೊಳ್ಳುವುದಕ್ಕೆ ಹಿಡಿಯುವ ಮೋಡಿ ಮಾಟ ಮಂತ್ರ ತಂತ್ರ ಅನೂನವಾದ ವ್ಯಾಪಾರ, ಹಾಗೆಯೇ ಸಮಯ ಸಂದರ್ಭ ವರ್ಣನೆಯ ಎರಡು ಕಾವ್ಯಗಳಿಗೂ ತಮ್ಮದೇ ಆದ ಸೊಬಗಿದೆ ; ಒಂದು ಹಣ್ಣುಕೊಯ್ಯುವ ಕೃಷಿಯಲ್ಲಿ ಅವಶ್ಯಕವಾಗುವ ಕಾಲ್ನಡಿಗೆ ಉಂಟಾಗುವ ರಮ್ಯ ನಿಸರ್ಗದ ಸಂಪರ್ಕ. ಹಳ್ಳಿಗಾಡು ದೃಶ್ಯಾವಳಿ - ಇತ್ಯಾದಿಯ ಉತ್ಸಾಹಪೂರಿತ ವರ್ಣನೆ. ಇನ್ನೊಂದು ಕವಿ ತನ್ನ ಸ್ನೇಹಿತ ನೀಕಿಯಸ್ಸನ ಹೆಂಡತಿಗೆ ಬಹುಮಾನವಾಗಿ ಕಳಿಸಿದ ಹಂಜಿಗೋಲು ತತ್ಸಂಬಂಧವಾಗಿ ಆಡಿದ ಸವಿನುಡಿಗಳ ಚಿತ್ರಣ. ಇಂಥ ಪದ್ಯಗಳಲ್ಲಿ ಕವಿ ತನ್ನ ವೈಯಕ್ತಿಕ ಭಾವ ಭಾವನೆಗಳಿಗೆ ರೂಪಗೊಟ್ಟಿದ್ದಾನೆ. 

	ಇವನ ಹೆಸರು ಸ್ಥಿರವಾಗಿ ನಿಂತಿರುವುದು ಈ ತೆರದ ಕಾವ್ಯಗಳಿಂದ ಅಲ್ಲ, ಅವುಗಳ ಮೇಲ್ಮೈ ಎಷ್ಟಿದ್ದರೂ ಗ್ರಾಮೀಣ ಕಾವ್ಯ ಸಂಪ್ರದಾಯ (ಪ್ಯಾಸ್ಟೊರಲ್ ಕನ್‍ರ್ವೇಷನ್) ಎಂಬ ಪಾಶ್ಚಾತ್ಯ ಸಾಹಿತ್ಯಪದ್ಧತಿಗೆ ಇವನೇ ಜನಕ. ಆದರ್ಶ, ಅಗ್ರೇಸರ, ಇವನ ಕವನಗಳಲ್ಲಿ ಎಲ್ಲೆಲ್ಲೂ ಮುಖ್ಯವಾಗಿ ಆರು ಕೃತಿಗಳಲ್ಲಿ, ಸಿಸಿಲಿಯ ಗ್ರಾಮಾಂತರ ಜೀವನ ಅತ್ಯಂತ ಬೆಡಗಿನಿಂದಲೂ ವನ್ಯತೆಯಿಂದಲೂ ಹುರುಪಿನಿಂದಲೂ ವಿಸ್ಮಯಕರವಾಗಿ ಚಿತ್ರಿತವಾಗಿದೆ. ಅವುಗಳಲ್ಲಿ ಬರುವ ಪಾತ್ರಗಳೂ ಹಸು, ಕುರಿ ಮೊದಲಾದುವನ್ನು ಪಾಲಿಸುವ ರೈತರು, ಹಳ್ಳಿಗರಾದರೂ ಅವರ ಸಂಸ್ಕøತಿ ಸಾಹಿತ್ಯಜ್ಞಾನ ನಯವಿನಯ ಹಿರಿದು. ಕಾವ್ಯ ಕಟ್ಟುವುದರಲ್ಲೂ ಹಾಡುವುದರಲ್ಲೂ ಅವರು ಗಟ್ಟಿಗರು. ಪಿಳ್ಳಂಗೋವಿ ಅವರ ವಾದ್ಯ. ಕಾವ್ಯದ ರಚನೆ ಸಂವಾದದಿಂ ಕೂಡಿ ನಾಟಕೀಯವಾಗಿದೆ. ಒಬ್ಬ ಕುರುಬನೊ ದನಗಾಹಿಯೊ ತನ್ನ ಸ್ವಂತ ಒಲುಮೆಯನ್ನು ಮೆಲುಕು ಹಾಕುತ್ತಿರುವಾಗ ಇನ್ನೊಬ್ಬ ಅವನ ಬಳಿಗೆ ಬರುತ್ತಾನೆ. ಅವನೂ ಅದೇ ವಿಧದ ನಲ್ಮೆಗಾರ. ತಮ್ಮ ತಮ್ಮ ಪ್ರೇಯಸಿಯರನ್ನು ಅವರು ಆಸಕ್ತಿಯಿಂದ ಪ್ರಶಂಸಿಸುತ್ತಾರೆ. ಯಾರು ಹೆಚ್ಚು ಯಾರು ಕಡಿಮೆ ಎಂಬ ವಿವಾದ ಏಳುತ್ತದೆ. ಇಬ್ಬರೂ ಮೂರನೆಯವನನ್ನು ತೀರ್ಪುಗಾರನಾಗಿ ಆರಿಸಿಕೊಳ್ಳುತ್ತಾರೆ. ತೀರ್ಪುಗಾರ ಸಾಮಾನ್ಯವಾಗಿ ಇಬ್ಬರೂ ಸರಿಸಮಾನ ಎಂಬ ನಿರ್ಧಾರವನ್ನು ಘೋಷಿಸಿ ಉಭಯ ಸಂಕಟದಿಂದ ಪಾರಾಗುತ್ತಾನೆ. ಅಥವಾ ಇಬ್ಬರು ಯುವಕರಲ್ಲಿ ಯಾರು ಉತ್ತಮ ಕವಿ ಎಂಬ ಲಲಿತ ಮೇಲಾಟ ಕಾವ್ಯಕ್ಕೆ ತಿರುಳಾಗಬಹುದು. ಅಂತೂ ನವ್ಯತೆಗೆ ಕುಂದಿಲ್ಲ. ಕಾವ್ಯಾನಂದಕ್ಕೆ ಕೊರೆಯಿಲ್ಲ. ಡ್ಯಾಫ್ನಿಸ್ಸಿಗಾಗಿ ಪ್ರಲಾಪ ಎಂಬ ಶೋಕಗೀತ ತೀಯಾಕ್ರಿಟಸ್ಸನ ಮೇರುಕೃತಿ, ಬಯನ್ ಎಂಬ ಕವಿ ಅದನ್ನು ಕೂಡಲೆ ಅನುಕರಿಸಿದ. ಅವನನ್ನು ಮಾಸ್ಕಸ್ ಅನುಕರಿಸಿದ. ಆಮೇಲೆ ವರ್ಜಿಲನಿಂದ ಹಿಡಿದು ಟೆನಿಸನ್ನನ ವರೆಗೂ ಯೂರೋಪಿನ ಕವಿಗಳಲ್ಲಿ ಅನೇಕರು ಗ್ರಾಮೀಣ ಶೋಕಗೀತ (ಪ್ಯಾಸ್ಟೊರಲ್ ಎಲಿಜಿ) ಕಟ್ಟಿ ಧನ್ಯರೆನ್ನಿಸಿಕೊಂಡರು. ಅವರಲ್ಲಿ ಹಲವರು ಅತ್ಯುಚ್ಚ ಕವಿಪುಂಗವರು. ಆದರೂ ಸಹಜ ಶೋಭೆಗೂ ಯಾಥಾರ್ಥತೆಗೂ ಸುಲಭ ಲಾಲಿತ್ಯಕ್ಕೂ ತೀಯಾಕ್ರಿಟಸ್ ಅಸದೃಶ. ಕೆಲವು ನಾಡುನಡಿಗಳನ್ನೂ ಈತ ಬರೆದನಂತೆ. ಆರು ಗಣದ ಪಂಕ್ತಿ ಇವನ ಛಂದಸ್ಸು. 												(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ